ಗುರುವಾರ, ಫೆಬ್ರವರಿ 12, 2009

ಅಕ್ಕನ ನೆನಪಲ್ಲಿ ನಾಲ್ಕು ಬಿಕ್ಕಳಿಕೆಗಳು



ಸಿಂಧನೂರಿನ ರಸ್ತೆಯ ಎಡಬಲಗಳಲ್ಲಿ ಜೈನ್ದೀಕ್ಷೆ ಪಡೆಯಲಿರುವ ಅಕ್ಕ ಸೋನಲ್ ನಾಹರ ಭಾವಚಿತ್ರಗಳು ರಾರಾಜಿಸುತ್ತಿವೆ. ಚಿತ್ರಗಳಲ್ಲಿ ಅಕ್ಕ ಮೆಹಂದಿ ಹಚ್ಚಿದ ಕೈಗಳನ್ನು ಕೊನೆಯದಾಗಿ ದಾರಿಹೋಕರಿಗೆಲ್ಲಾ ತೋರಿಸುತ್ತಿದ್ದಾಳೆ. ಅಕ್ಕನ ಮುಖದಲ್ಲಿ ಇನ್ನೂ ನಗು ಇದೆ. ಎಲ್ಲ ಕರುಳ ಬಳ್ಳಿಗಳನ್ನು ಕಳೆದುಕೊಂಡು ಅಕ್ಕ ದೂರ ಹೋಗಲು ಸಿದ್ದಳಾಗಿದ್ದಾಳೆ. ನನಗೆ ಅನಿಸಿದ ಹಾಗೆ ಜಗತ್ತಿನ ಕಠಿಣ ಪದ್ದತಿಗಳಿರುವುದು ಜೈನ ಸಮುದಾಯದಲ್ಲಿ.ದೀಕ್ಷೆ ಪಡೆದವರು ಸೂರ್ಯ ಮುಳುಗು ಮುಂಚೆ ನೀರು ಕುಡಿಯಬೇಕು. ಊಟ ಮಾಡಬೇಕು.ಎಷ್ಟು ದೂರವಾದರೂ ಕಾಲ್ನಡಿಗೆಯಲ್ಲೆ ಸಾಗಬೇಕು. ಮೈಮೇಲಿನ ಕೂದಲುಗಳನ್ನು ಕೈಯಿಂದ ಕಿತ್ತುಕೊಳ್ಳಬೇಕು. ಕೊನೆಗೆ ಸಲ್ಲೇಖನ ವೃತದ ಮೂಲಕ ಪ್ರಾಣ ಅಪರ್ಿಸಬೇಕು.ಅಬ್ಬಬ್ಬಾ.. ಕೇಳಿದರೆ ಉಸಿರುಗಟ್ಟಿದಂತಾಗುತ್ತದೆ. ಹೀಗೆ ಇದ್ದು ಪಡೆಯುವ ದುಃಖಕ್ಕಿಂತ ಕರೆದು ಪಡೆಯುವ ದುಃಖದಲ್ಲಿ ಅಕ್ಕನಿಗೆ ಖುಷಿ. ಅಕ್ಕನ ಸುತ್ತ ಯಾವ ಗೋಡೆಗಳಿಲ್ಲ. ಬಣ್ಣಗಳಿಲ್ಲ. ಇರುವುದೊಂದು ಭೂಮಿ. ಜೀವಿಗಳು.ಜಗದ ಸುಖಲೋಲುಪತೆಯನ್ನು ಅಕ್ಕ ಜಾಡಿಸಿ ಒದ್ದಿದ್ದಾಳೆ. ಮೇರೆಗಳನ್ನು ಕಿತ್ತೊಗೆದು ಅಹಿಂಸೆ ಕೊಡವಿಡಿದು ಪಾರಿವಾಳದ ಹಾಗೆ ಹಾರ ಹೊರಟಿದ್ದಾಳೆ. ಜೈನ ಸಮುದಾಯದ ಗುರುಗಳಿಂದ ದೀಕ್ಷೆ ಪಡೆದು ನಂತರ ಹುಟ್ಟಿದ ಊರಿಗೆ ಬರುವುದು 10 ವರ್ಷಕ್ಕೋ 20ವರ್ಷಕ್ಕೋ. ಅದು ಕಾಲ್ನಡಿಗೆಯಲ್ಲಿ. ಬಂದರೂ ಬರಬಹುದು ಇಲ್ಲದಿದ್ದರೆ ಇಲ್ಲ. ಸೋನಾಲ್ ನಾಹರ ಸಹೋದರಿಯರಾದ ಪ್ರಿಯಸ್ವಣರ್ಾಂಜನ ಶ್ರೀಜಿ 1995 ಫೆಬ್ರುವರಿ 13ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ, 2004ರಲ್ಲಿ ಪ್ರಿಯಶ್ರೇಷ್ಠಾಂಜನಾ ಶ್ರೀಜಿ ಆಂಧ್ರಪ್ರದೇಶದ ಆದೋನಿ ಸಮೀಪದ ಪೆದ್ದತುಂಬಲಂ ಗ್ರಾಮದ ಪಾಶ್ರ್ವಮಣಿ ದೇವಸ್ಥಾನದಲ್ಲಿ ದೀಕ್ಷೆ ಪಡೆದಿದ್ದರು. ಸದ್ಯ ಅಕ್ಕ ಸೋನಾಲ್ ನಾಹರ ಫೆ.15 .2009ರಂದು ದೀಕ್ಷೆ ಪಡೆಯುತ್ತಿದ್ದಾರೆ. ದೀಕ್ಷಾ ಸಮಾರಂಭಕ್ಕೆ ಇಡೀ ನಗರದ ಜೈನ ಸಮುದಾಯವೇ ಸಜ್ಜಾಗಿದೆ. ಈ ಬಗ್ಗೆ ಕಳೆದೆರಡು ದಿನಗಳ ಹಿಂದೆ ನಮ್ಮ ಪತ್ರಿಕೆಯಲ್ಲಿ ವರದಿ ಮಾಡಲು ಸಮಾರಂಭದ ಆಹ್ವಾನ ಪತ್ರಿಕೆ ಹಿಡಿದು ಅಕ್ಕನ ಮುಖ ನೋಡಿದಾಗ ಹನಿಗಳೆರಡು ಉದುರಿದವು. ನನ್ನ ಅಕ್ಕ,ತಂಗಿ ನೆನಪಾದರು.


-ಬಸವರಾಜ ಹಳ್ಳಿ


2 ಕಾಮೆಂಟ್‌ಗಳು:

  1. ಎಲ್ಲಾ ಸರಿ ಬಸವ, ಆದರೆ ಆಕೆ ಹೊರಟಿರುವುದಕ್ಕೆ ಜೈನ ಸಮುದಾಯವಷ್ಟೆ ಅಲ್ಲ; ಇಡೀ ನಗರದ ಜನ ಖುಷಿಯಿಂದ ಶುಭಾಶಯ ಕೋರಿದ್ದಾರೆ. ಆಕೆಯ ಸನ್ಯಾಸಿನಿ ಜೀವನ ಸುಖಮಯವಾಗಿರಲಿ ಎಂದು ಎಂಥ ವಿಡಂಬನೆ ನೋಡು. ಆಕೆ ಹೊರಟಿರುವುದು ಕಷ್ಟದ ಜೀವನಕ್ಕಾದರೂ ಜನ ಆಕೆಗೆ ಕೋರುತ್ತಿರುವ ಶುಭಾಶಯಗಳು ಅಪಹಾಸ್ಯವೆಂಬಂತೆ ಭಾಸವಾಗುತ್ತಿವೆ. ಹೀಗೆ ಸನ್ಯಾಸ ಜೀವನ ನಡೆಸುವವರು ಸಮಾಜದ ಒಳಿತಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದೇ ಪ್ರಶ್ನಾರ್ಹ. ಸನ್ಯಾಸದ ಮೂಲಕ ಇವರು ಯಾವ ಮೆಸೇಜ್ ನೀಡಬಯಸುತ್ತಾರೊ ಗೊತ್ತಿಲ್ಲ. ಸಂಸಾರಿಯಾಗಿಯೂ ಅಂಥಹದೇ ಸೇವೆಯನ್ನು ಮಾಡಬಹುದು. ಸಮಾಜ, ಜನ ಸೇವೆ ಮಾಡಬೇಕೆನ್ನುವವರಿಗೆ ಸನ್ಯಾಸವೇ ಶ್ರೇಷ್ಠ ಎಂದೂ ಅಲ್ಲ; ಸಂಸಾರಿಯ ಜೀವನವೇ ಸೂಕ್ತ ಎಂದೇನಲ್ಲ. ಪರಿಶುದ್ಧ ಮನಸ್ಸು ಕೇವಲ ಸನ್ಯಾಸ ಸ್ವೀಕರಿಸಿದರೆ ಮಾತ್ರ ದೊರೆಯುತ್ತದೆ ಎಂದೇನೂ ನನಗೆ ಅನ್ನಿಸುವುದಿಲ್ಲ. ಜೈನ ಸಮುದಾಯದ ಅನೇಕ ಶ್ರೀಮಂತರೇ ಅಲ್ಲವೇ ಜನಸಾಮಾನ್ಯರನ್ನು ತಗಣಿಯಂತೆ ರಕ್ತ ಹೀರುವುದು. ಇಂಥಹ ಸನ್ಯಾಸಿನಿಯರು ಅಂಥಹ ಜನಪೀಡಕರನ್ನು ಸಹಿಸಿಕೊಂಡೇ ಅಲ್ಲವೇ ಬದುಕುವುದು! ಹೀಗಿದ್ದಾಗ ಸೋನಾರ ಸನ್ಯಾಸತ್ವ ಸ್ವೀಕಾರ... ಕೇವಲ ನಾಟಕ ಎನ್ನಿಸುತ್ತಿದೆ... ಏನೇ ಆಗಲಿ ನಿನ್ನ ಕಣ್ಣುಗಳಿಂದ ಬಿದ್ದ ನಾಲ್ಕು ಹನಿ ಕಣ್ಣೀರು ಅದು ಆಕೆ ಕಲ್ಲು ಮುಳ್ಳು ತುಳಿಯುವಾಗ ನೀರ ಅಲೆಯಾಗಿ ತೇಲಿ ಬರಲಿ... ಯಾಕೆಂದರೆ ಇಪ್ಪತ್ತು ವರ್ಷ ಸುಖದಲ್ಲಿ ಬೆಳೆದ ಬಾಲೆ ಆಕೆ...
    ಏನೇ ಆದರೂ ಚೆನ್ನಾಗಿಯೇ ಬರೆದಿದ್ದಿ.
    -ಕಲಿಗಣನಾಥ ಗುಡದೂರು

    ಪ್ರತ್ಯುತ್ತರಅಳಿಸಿ
  2. ಈ ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟೇ ಧರ್ಮಗಳಿವೆ ಎನ್ನುವ ಕವಿವಾಣಿ ಕೇಳಿಲ್ಲವೆ? ಹಾಗೆ ಅವರವರಿಗೆ ಸರಿ ಅನ್ನಿಸಿದ್ದನ್ನು ಅವರವರು ಮಾಡುತ್ತಾರೆ. ಆದರೆ ಅದಕ್ಕಾಗಿ ಬೇರೆಯವರು ಬಲವಂತ ಮಾಡಬಾರದು ಅಷ್ಟೆ. ಈಗ ರಾಮಸೇನೆಯವರು ಮಾಡುತ್ತಾರಲ್ಲ ಹಾಗೆ. ನಿಮ್ಮ ಚಿಕ್ಕ ಚೊಕ್ಕ ಬರವಣಿಗೆ ಇಷ್ಟವಾಯಿತು.

    ಪ್ರತ್ಯುತ್ತರಅಳಿಸಿ