ಸೋಮವಾರ, ಫೆಬ್ರವರಿ 16, 2009

ಗುಡದೂರು "ಮಾಮೂಲಿಗಾಂಧಿ"




ಬಹಳ ಜತನದಿಂದ ಬರೆದ ಕಥೆಗಳನ್ನು 'ಮಾಮೂಲಿ ಗಾಂಧಿ' ರೂಪದಲ್ಲಿ ಕೊಡಲು ಸಜ್ಜಾಗಿರುವ ನನ್ನ ಗುರುಗಳು ಹಾಗೂ ಕಥೆಗಾರರು ಆದ ಕಲಿಗಣನಾಥ ಗುಡದೂರು ಮೂರನೇ ಕಥಾ ಸಂಕಲನದಲ್ಲಿ ಹೊಸ ಜಾಡು ಹಿಡಿದಿದ್ದಾರೆ. ಈ ಹಿಂದಿನ ಕಥಾ ಸಂಕಲನಗಳಲ್ಲಿ ರಾಯಚೂರು ಭಾಗದ ಜನರ ಜವಾರಿ ಭಾಷೆಯನ್ನೆ ಜೀವಾಳವಾಗಿಸಿಕೊಂಡು ಕನ್ನಡ ಕಥಾಲೋಕಕ್ಕೆ ಹೊಸ ಕಥೆಗಳನ್ನು ಪೋಣಿಸಿರುವ ಅವರು ಈ ಸಲ ಮತ್ತಷ್ಟು ವಿಭಿನ್ನ ಪ್ರಯೋಗಳನ್ನು ಮಾಡಿದ್ದಾರೆ. ಬದಲಾದ ಶೈಲಿಯ ಮೂಲಕ ನೂತನ ಕಥಾವಸ್ತುವಿನೊಂದಿಗೆ ಅವರಲ್ಲಿನ ಕತೆಗಾರ ಈ ಬಾರಿ ಮಗ್ಗಲು ಬದಲಿಸಿದ್ದಾನೆ. ಈ ಹಿಂದಿನ ಸಂಕಲನದ ಕಥೆಗಳನ್ನು ಓದಿದವರು "ಮಾಮೂಲಿ ಗಾಂಧಿ" ಸಂಗ ಮಾಡಿದರೆ ಇದು ಗುಡದೂರರ ಕಥಾ ಸಂಕಲನವಾ ? ಎಂದು ಸಂಶಯಪಡುವಷ್ಟು ಕಲರ್ಫುಲ್ ಆಗಿದೆ. ಅವರ ಕಥೆಗಳು ಇನ್ನೂ ಅಚ್ಚಿಗೆ ಹೋಗುವ ಮುಂಚೆ ಮೂರ್ನಾಲ್ಕು ಬಾರಿ ಓದಿರುವ ನನಗೆ ಒಂಥರದ ಖುಷಿ. ಕೆಲ ಕಥೆಗಳನ್ನು ನನಗೆ ಹೇಳುತ್ತ ..ಹೇಳುತ್ತಲೆ...ಕಂಪ್ಯೂಟರ್ನಲ್ಲಿ ಟೈಪಿಸಿದ್ದುಂಟು. ಸಂಕಲನದ ಕಥೆಗಳು ಪ್ರಜಾವಾಣಿ ಸಾಪ್ತಾಹಿಕ, ಮಯೂರ, ಸಂಡೆ ಇಂಡಿಯನ್, ವಿಕ್ರಾಂತ ಕನರ್ಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ತಮ್ಮ ವಿಶಿಷ್ಠ ಕಥೆಗಳ ಮೂಲಕ ವಾರಿಗೆಯ ಬರಹಗಾರರಲ್ಲಿ ಅಚ್ಚರಿ ಮೂಡಿಸಿರುವ "ಮೇಷ್ಟ್ರ" ಮಾಮೂಲಿ ಗಾಂಧಿ" ಗೆ ಇಷ್ಟರಲ್ಲಿ ಬಿಡುಗಡೆಯಿದೆ.ಕವಿ, ಕಥೆಗಾರ ವಿ.ಎಂ.ಮಂಜುನಾಥ ಅದ್ಬುತವಾಗಿ ಮುಖಪುಟ ರಚಿಸಿಕೊಟ್ಟಿದ್ದಾರೆ. ಕವಿ ವಿ.ಆರ್.ಕಾಪರ್ೆಂಟರ್ ಕರಡು ತಿದ್ದುವಲ್ಲಿ ಸಹಕರಿಸಿದ್ದಾರೆ. ಅವರಿಗೆ ತುಂಬಾ ಧನ್ಯವಾದ. ಸದಾ ಕಥೆಗಳಂತೆ ಬದುಕುವ, ತಮ್ಮ ಆಜುಬಾಜಿನ ಯುವಕರಿಗೆ ಸಾಹಿತ್ಯದ ಕಿಚ್ಚುಹಚ್ಚಿ ಸಾಹಿತ್ಯದಲ್ಲಿ ತೊಡಗುವಂತೆ ಹುರಿದುಂಬಿಸುವ "ಮೇಷ್ಟ್ರ" ಪ್ರೀತಿಯ ಕಾಳಜಿಗೆ ಧನ್ಯವಾದ ಹೇಳುತ್ತಾ ಅವರ ಮಾಮೂಲಿ ಗಾಂಧಿಗಾಗಿ ಕಾಯುತ್ತಿದ್ದೇನೆ.
- ಬಸವರಾಜ ಹಳ್ಳಿ

ಗುರುವಾರ, ಫೆಬ್ರವರಿ 12, 2009

ಅಕ್ಕನ ನೆನಪಲ್ಲಿ ನಾಲ್ಕು ಬಿಕ್ಕಳಿಕೆಗಳು



ಸಿಂಧನೂರಿನ ರಸ್ತೆಯ ಎಡಬಲಗಳಲ್ಲಿ ಜೈನ್ದೀಕ್ಷೆ ಪಡೆಯಲಿರುವ ಅಕ್ಕ ಸೋನಲ್ ನಾಹರ ಭಾವಚಿತ್ರಗಳು ರಾರಾಜಿಸುತ್ತಿವೆ. ಚಿತ್ರಗಳಲ್ಲಿ ಅಕ್ಕ ಮೆಹಂದಿ ಹಚ್ಚಿದ ಕೈಗಳನ್ನು ಕೊನೆಯದಾಗಿ ದಾರಿಹೋಕರಿಗೆಲ್ಲಾ ತೋರಿಸುತ್ತಿದ್ದಾಳೆ. ಅಕ್ಕನ ಮುಖದಲ್ಲಿ ಇನ್ನೂ ನಗು ಇದೆ. ಎಲ್ಲ ಕರುಳ ಬಳ್ಳಿಗಳನ್ನು ಕಳೆದುಕೊಂಡು ಅಕ್ಕ ದೂರ ಹೋಗಲು ಸಿದ್ದಳಾಗಿದ್ದಾಳೆ. ನನಗೆ ಅನಿಸಿದ ಹಾಗೆ ಜಗತ್ತಿನ ಕಠಿಣ ಪದ್ದತಿಗಳಿರುವುದು ಜೈನ ಸಮುದಾಯದಲ್ಲಿ.ದೀಕ್ಷೆ ಪಡೆದವರು ಸೂರ್ಯ ಮುಳುಗು ಮುಂಚೆ ನೀರು ಕುಡಿಯಬೇಕು. ಊಟ ಮಾಡಬೇಕು.ಎಷ್ಟು ದೂರವಾದರೂ ಕಾಲ್ನಡಿಗೆಯಲ್ಲೆ ಸಾಗಬೇಕು. ಮೈಮೇಲಿನ ಕೂದಲುಗಳನ್ನು ಕೈಯಿಂದ ಕಿತ್ತುಕೊಳ್ಳಬೇಕು. ಕೊನೆಗೆ ಸಲ್ಲೇಖನ ವೃತದ ಮೂಲಕ ಪ್ರಾಣ ಅಪರ್ಿಸಬೇಕು.ಅಬ್ಬಬ್ಬಾ.. ಕೇಳಿದರೆ ಉಸಿರುಗಟ್ಟಿದಂತಾಗುತ್ತದೆ. ಹೀಗೆ ಇದ್ದು ಪಡೆಯುವ ದುಃಖಕ್ಕಿಂತ ಕರೆದು ಪಡೆಯುವ ದುಃಖದಲ್ಲಿ ಅಕ್ಕನಿಗೆ ಖುಷಿ. ಅಕ್ಕನ ಸುತ್ತ ಯಾವ ಗೋಡೆಗಳಿಲ್ಲ. ಬಣ್ಣಗಳಿಲ್ಲ. ಇರುವುದೊಂದು ಭೂಮಿ. ಜೀವಿಗಳು.ಜಗದ ಸುಖಲೋಲುಪತೆಯನ್ನು ಅಕ್ಕ ಜಾಡಿಸಿ ಒದ್ದಿದ್ದಾಳೆ. ಮೇರೆಗಳನ್ನು ಕಿತ್ತೊಗೆದು ಅಹಿಂಸೆ ಕೊಡವಿಡಿದು ಪಾರಿವಾಳದ ಹಾಗೆ ಹಾರ ಹೊರಟಿದ್ದಾಳೆ. ಜೈನ ಸಮುದಾಯದ ಗುರುಗಳಿಂದ ದೀಕ್ಷೆ ಪಡೆದು ನಂತರ ಹುಟ್ಟಿದ ಊರಿಗೆ ಬರುವುದು 10 ವರ್ಷಕ್ಕೋ 20ವರ್ಷಕ್ಕೋ. ಅದು ಕಾಲ್ನಡಿಗೆಯಲ್ಲಿ. ಬಂದರೂ ಬರಬಹುದು ಇಲ್ಲದಿದ್ದರೆ ಇಲ್ಲ. ಸೋನಾಲ್ ನಾಹರ ಸಹೋದರಿಯರಾದ ಪ್ರಿಯಸ್ವಣರ್ಾಂಜನ ಶ್ರೀಜಿ 1995 ಫೆಬ್ರುವರಿ 13ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ, 2004ರಲ್ಲಿ ಪ್ರಿಯಶ್ರೇಷ್ಠಾಂಜನಾ ಶ್ರೀಜಿ ಆಂಧ್ರಪ್ರದೇಶದ ಆದೋನಿ ಸಮೀಪದ ಪೆದ್ದತುಂಬಲಂ ಗ್ರಾಮದ ಪಾಶ್ರ್ವಮಣಿ ದೇವಸ್ಥಾನದಲ್ಲಿ ದೀಕ್ಷೆ ಪಡೆದಿದ್ದರು. ಸದ್ಯ ಅಕ್ಕ ಸೋನಾಲ್ ನಾಹರ ಫೆ.15 .2009ರಂದು ದೀಕ್ಷೆ ಪಡೆಯುತ್ತಿದ್ದಾರೆ. ದೀಕ್ಷಾ ಸಮಾರಂಭಕ್ಕೆ ಇಡೀ ನಗರದ ಜೈನ ಸಮುದಾಯವೇ ಸಜ್ಜಾಗಿದೆ. ಈ ಬಗ್ಗೆ ಕಳೆದೆರಡು ದಿನಗಳ ಹಿಂದೆ ನಮ್ಮ ಪತ್ರಿಕೆಯಲ್ಲಿ ವರದಿ ಮಾಡಲು ಸಮಾರಂಭದ ಆಹ್ವಾನ ಪತ್ರಿಕೆ ಹಿಡಿದು ಅಕ್ಕನ ಮುಖ ನೋಡಿದಾಗ ಹನಿಗಳೆರಡು ಉದುರಿದವು. ನನ್ನ ಅಕ್ಕ,ತಂಗಿ ನೆನಪಾದರು.


-ಬಸವರಾಜ ಹಳ್ಳಿ


ಮಂಗಳವಾರ, ಫೆಬ್ರವರಿ 3, 2009

ಬದುಕು ಹಸಿರಾಗಿಸಿದ ಕುಡುಗೋಲು


ಬದುಕು ಹಸಿರಾಗಿಸಿದ ಕುಡುಗೋಲು ನಾನು ನಿನ್ನನ್ನು ಪದೇ ಪದೇ ನೆನೆಪಿಸಿಕೊಳ್ಳುವಂತಾಗಿದೆ. ಸಿಟ್ಟಿನಲ್ಲಿ ನಾನು ಎಸೆದಿದ್ದ್ದು ಖರೆ. ಆದರೆ ನನಗೆ ನಿನ್ನ ತಾಕತ್ತು ,ಮಾಡಿದ ಉಪಕಾರ ಎಳ್ಳಷ್ಟು ಗೊತ್ತಿರಲಿಲ್ಲ. ಅದಕ್ಕೆ ನನ್ನ ಕೈ ಬೆರಳುಗಳಲ್ಲಿ ಈಗಿಗ ಹರಿದಾಡುತ್ತಿರುವ ನೋಟುಗಳು ಕಾರಣವೆನಿಸುತ್ತದೆ.ನಾನು ಮೊದಲಿನಂತಿಲ್ಲ ಹೌದು. ಮಾತಿಗೊಮ್ಮೆ ಯಾರ್ಯಾರ ಮುಂದೆ ಪ್ರತಿ ಬೆರಳಿಗಿಟ್ಟ ಉಂಗುರ, ಕೊರಳಿಗೆ ಹಾಕಿದ ಬಂಗಾರದ ಚೈನು ಎಲ್ಲ ಪ್ರದಶರ್ಿಸುತ್ತಿದ್ದೇನೆ. ರೂಪಾಯಿ ರೂಪಾಯಿಗೂ ಅಲೆದ ದಿನಗಳು ಮರೆತಂತಿದ್ದೇನೆ. ತಲೆಯಲ್ಲಿ ಅಹಂ ತೊಂಬತ್ತು ಡಿಗ್ರಿ ದಾಟಿದೆ ನಿನ್ನ ಜೊತೆಗಾತರ್ಿ ಅವ್ವ ಮೂಲೆ ಹಿಡಿದಿದ್ದಾಳೆ.ಆದರೂ ಅವ್ವನ ಕೈಗಳು ದಿನವೂ ನಿನ್ನ ಸ್ಪರ್ಶಕ್ಕೆ ಹಾತೊರೆಯುತ್ತವೆ. 'ಮಾಡುತ್ತಾಳಂತೆ ಕೆಲಸ ಬುದ್ದಿಗಿದ್ದಿ ಇದಿಯೇ ನಿಂಗೆ' ಎಂದು ನಾನು ಬೈದಾಗಲೊಮ್ಮೆ ಎರಡ್ಮೂರು ದಿನ ಮಾತುಬಿಟ್ಟು ಮತ್ತೆ ಬಯ್ಯುತ್ತೇನೆಂಬ ಭಯವಿದ್ದರೂ ಅದೇ ಮಾತಾಡುತ್ತಾಳೆ. ನಿನ್ನೊಂದಿಗಿದ್ದಷ್ಟು ಅವ್ವನ ಒಡನಾಟ ಮನೆಯ ಯಾರೊಂದಿಗಿಲ್ಲ.ನೀನು ಅವ್ವ ದುಡಿದು ಕುಟುಂಬಕ್ಕೆ ಕೂಳು ಹಾಕಿದಿರಿ. ನನ್ನ ಓದಿಗೆ ನಿನ್ನ ಸಹಾಯ ನೆನೆಸಿಕೊಂಡರೆ ಕಣ್ಣಾಲಿಗಳಲ್ಲಿ ನೀರಾಡುತ್ತವೆ. ಅವತ್ತು ಏನೋ ಕಾರಣಕ್ಕೆ ಬಂದ ಸಿಟ್ಟು ತಡೆದುಕೊಂಡಿದ್ದರೆ ನಿನ್ನನ್ನು ಬದುಕಿಸಬದಿತ್ತೇನೋ? ನನಗೀಗ ದೊಡ್ಡ ಪ್ರಮಾದವೆಸಗಿದ ಪಾಪಪ್ರಜ್ಞೆ ಕಾಡುತ್ತಿದೆ. ನಾನು ಎಸೆದ ರಭಸಕ್ಕೆ ಪುಡಿ ಪುಡಿಯಾದ ನಿನ್ನನ್ನು ಕಂಡು ಅವ್ವ ಮರುಗಿದ ಪರಿ ಹೇಳಲಸಾಧ್ಯ. ಬಹಳ ಜತನದಿಂದ ನಿನ್ನನ್ನು ತನ್ನ ಮಗನೆಂಬಂತೆ ನೋಡಿಕೊಂಡು ಬಂದಿದ್ದ ಅವ್ವ ಬಹಳ ಸಿಟ್ಟಿನಿಂದ ಅವತ್ತು 'ನೀನು ಇವತ್ತ ಸಕರ್ಾರಿ ನೌಕ್ರಿ ಮಾಡಿ 15 ಸಾವಿರ ಎಣಿಸ್ತಿ ಅಂದ್ರ ಆ ಕುಡಗೋಲ ಕಾರಣ. ನಿನ್ನ ಸಾಲಿ ಪೀಸು ಅದ್ರಲ್ಯ ದುಡಿದು ಕಟ್ಟೀನೇ ಲೋ' ಎಂದಾಗ ನನಗೆ ಮಾತೆ ಹೊರಡಲಿಲ್ಲ. ನನಗೀಗ ಜ್ಞಾನೋದಯವಾದಂತಾಗಿದೆ.ವಿದ್ಯ,ಬುದ್ದಿ ದಯಪಾಲಿಸಿ, ನನ್ನ ಜೀವನ ಹಸಿರಾಗಿಸಿದ ನಿನಗೆ ನನ್ನ ಪ್ರಣಾಮಗಳು. ನಾನು ಏನಾದರೂ ಗೀಚುವಾಗಲೊಮ್ಮೆ ನನ್ನ ಪೆನ್ನಿಗೆ ಶಕ್ತಿ ತುಂಬಿದ ನೀನು ಹೊಳೆಯುವ ಆಕಾರದಲ್ಲಿ ಮೂಡಿಬರುತಿ.್ತ ಕವನಗಳಲ್ಲಿ ಇಣುಕುತ್ತಿ. ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡು ನಿನ್ನ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಮೊರೆಯಿಡುತ್ತಿದ್ದೇನೆ.

ಬಸವರಾಜ ಹಳ್ಳಿ