

ಬಹಳ ಜತನದಿಂದ ಬರೆದ ಕಥೆಗಳನ್ನು 'ಮಾಮೂಲಿ ಗಾಂಧಿ' ರೂಪದಲ್ಲಿ ಕೊಡಲು ಸಜ್ಜಾಗಿರುವ ನನ್ನ ಗುರುಗಳು ಹಾಗೂ ಕಥೆಗಾರರು ಆದ ಕಲಿಗಣನಾಥ ಗುಡದೂರು ಮೂರನೇ ಕಥಾ ಸಂಕಲನದಲ್ಲಿ ಹೊಸ ಜಾಡು ಹಿಡಿದಿದ್ದಾರೆ. ಈ ಹಿಂದಿನ ಕಥಾ ಸಂಕಲನಗಳಲ್ಲಿ ರಾಯಚೂರು ಭಾಗದ ಜನರ ಜವಾರಿ ಭಾಷೆಯನ್ನೆ ಜೀವಾಳವಾಗಿಸಿಕೊಂಡು ಕನ್ನಡ ಕಥಾಲೋಕಕ್ಕೆ ಹೊಸ ಕಥೆಗಳನ್ನು ಪೋಣಿಸಿರುವ ಅವರು ಈ ಸಲ ಮತ್ತಷ್ಟು ವಿಭಿನ್ನ ಪ್ರಯೋಗಳನ್ನು ಮಾಡಿದ್ದಾರೆ. ಬದಲಾದ ಶೈಲಿಯ ಮೂಲಕ ನೂತನ ಕಥಾವಸ್ತುವಿನೊಂದಿಗೆ ಅವರಲ್ಲಿನ ಕತೆಗಾರ ಈ ಬಾರಿ ಮಗ್ಗಲು ಬದಲಿಸಿದ್ದಾನೆ. ಈ ಹಿಂದಿನ ಸಂಕಲನದ ಕಥೆಗಳನ್ನು ಓದಿದವರು "ಮಾಮೂಲಿ ಗಾಂಧಿ" ಸಂಗ ಮಾಡಿದರೆ ಇದು ಗುಡದೂರರ ಕಥಾ ಸಂಕಲನವಾ ? ಎಂದು ಸಂಶಯಪಡುವಷ್ಟು ಕಲರ್ಫುಲ್ ಆಗಿದೆ. ಅವರ ಕಥೆಗಳು ಇನ್ನೂ ಅಚ್ಚಿಗೆ ಹೋಗುವ ಮುಂಚೆ ಮೂರ್ನಾಲ್ಕು ಬಾರಿ ಓದಿರುವ ನನಗೆ ಒಂಥರದ ಖುಷಿ. ಕೆಲ ಕಥೆಗಳನ್ನು ನನಗೆ ಹೇಳುತ್ತ ..ಹೇಳುತ್ತಲೆ...ಕಂಪ್ಯೂಟರ್ನಲ್ಲಿ ಟೈಪಿಸಿದ್ದುಂಟು. ಸಂಕಲನದ ಕಥೆಗಳು ಪ್ರಜಾವಾಣಿ ಸಾಪ್ತಾಹಿಕ, ಮಯೂರ, ಸಂಡೆ ಇಂಡಿಯನ್, ವಿಕ್ರಾಂತ ಕನರ್ಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ತಮ್ಮ ವಿಶಿಷ್ಠ ಕಥೆಗಳ ಮೂಲಕ ವಾರಿಗೆಯ ಬರಹಗಾರರಲ್ಲಿ ಅಚ್ಚರಿ ಮೂಡಿಸಿರುವ "ಮೇಷ್ಟ್ರ" ಮಾಮೂಲಿ ಗಾಂಧಿ" ಗೆ ಇಷ್ಟರಲ್ಲಿ ಬಿಡುಗಡೆಯಿದೆ.ಕವಿ, ಕಥೆಗಾರ ವಿ.ಎಂ.ಮಂಜುನಾಥ ಅದ್ಬುತವಾಗಿ ಮುಖಪುಟ ರಚಿಸಿಕೊಟ್ಟಿದ್ದಾರೆ. ಕವಿ ವಿ.ಆರ್.ಕಾಪರ್ೆಂಟರ್ ಕರಡು ತಿದ್ದುವಲ್ಲಿ ಸಹಕರಿಸಿದ್ದಾರೆ. ಅವರಿಗೆ ತುಂಬಾ ಧನ್ಯವಾದ. ಸದಾ ಕಥೆಗಳಂತೆ ಬದುಕುವ, ತಮ್ಮ ಆಜುಬಾಜಿನ ಯುವಕರಿಗೆ ಸಾಹಿತ್ಯದ ಕಿಚ್ಚುಹಚ್ಚಿ ಸಾಹಿತ್ಯದಲ್ಲಿ ತೊಡಗುವಂತೆ ಹುರಿದುಂಬಿಸುವ "ಮೇಷ್ಟ್ರ" ಪ್ರೀತಿಯ ಕಾಳಜಿಗೆ ಧನ್ಯವಾದ ಹೇಳುತ್ತಾ ಅವರ ಮಾಮೂಲಿ ಗಾಂಧಿಗಾಗಿ ಕಾಯುತ್ತಿದ್ದೇನೆ.
- ಬಸವರಾಜ ಹಳ್ಳಿ